ರೈತರ ಬೆಂಬಲ ಬೆಲೆಯಂತೆ ಖರೀದಿ ಮಾಡಲು ಖರೀದಿ ಕೇಂದ್ರವನ್ನು ತೆರೆಯುವುದು ಅಸಾಧ್ಯ. ಸಂಬಳ ಕೊಡುವುದಕ್ಕೆ ಹಣ ಇಲ್ಲ - ಬಿ.ಎಸ್.ವೈ
ಕೊಪ್ಪಳ(ಅ.10): ಘೋಷಿತ ಬೆಂಬಲ ಬೆಲೆಯಂತೆ ಖರೀದಿ ಮಾಡಲು ಖರೀದಿ ಕೇಂದ್ರವನ್ನು ತೆರೆಯುವುದು ಅಸಾಧ್ಯ. ಸಂಬಳ ಕೊಡುವುದಕ್ಕೆ ಹಣ ಇಲ್ಲ ಎಂದ ಮೇಲೆ ಇನ್ನು ಬೆಂಬಲ ಬೆಲೆ ಖರೀದಿ ಮಾಡಲು ಹಣ ಎಲ್ಲಿಂದ ತರಲಿ? ಇದು, ಅವರಿವರ ಹೇಳಿಕ ಅಥವಾ ಪ್ರಶ್ನೆಯಲ್ಲ. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಕೈಚೆಲ್ಲಿದ ಪರಿ. ಮೆಕ್ಕೆಜೋಳ ಮತ್ತು ಸಜ್ಜೆ ಬೆಂಬಲ ಬೆಲೆ ಕೇಂದ್ರವನ್ನು ತೆರೆಯುವಂತೆ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಧರಣಿ ಕೈಬಿಟ್ಟು ಬೆಂಗಳೂರಿಗೆ ನಿಯೋಗದಲ್ಲಿ ತೆರಳಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರ ಸಾರಥ್ಯದಲ್ಲಿ ಜಿಲ್ಲೆಯ ನಿಯೋಗ ಗುರುವಾರ ಸಿ.ಎಂ. ಯಡಿಯೂರಪ್ಪ ಅವರನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿತು. ರಾಜ್ಯ ರೈತ ಸಂಘದ ಮನವಿಯನ್ನು ಸಲ್ಲಿಸಿ, ಕೂಡಲೇ ಬೆಂಬಲ ಬೆಲೆ ಕೇಂದ್ರ ತೆರೆಯುವಂತೆ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ವರ್ಷ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವುದು ಅಸಾಧ್ಯ ಎಂದಿದ್ದಾರೆ.