ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಸಿಬಿಐ ದಾಳಿ..!
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಇಡೀ ದೇಶವೇ ಆ ಸಂತ್ರಸ್ತ ಕುಟುಂಬದ ಪರವಾಗಿ ನಿಂತಿತ್ತು. ಅದೇ ರೀತಿ ಕರ್ನಾಟಕದಲ್ಲೂ ಸಹ ಕಾಂಗ್ರೆಸ್ ಪಕ್ಷ, ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ರಾಜ್ಯಾದ್ಯಂತ ವ್ಯಾಪಕವಾಗಿ ಈ ಬಗ್ಗೆ ಪ್ರತಿಭಟನೆ ನಡೆಸಿದ್ದರು. ಈ ರೀತಿ ದಲಿತ ಸಮುದಾಯದ ಮೇಲಿನ ದೌರ್ಜನ್ಯದ ಬಗ್ಗೆ ಮುಂದಿನ ದಿನಗಳಲ್ಲೂ ದೊಡ್ಡ ಮಟ್ಟದ ಪ್ರತಿಭಟನೆ, ಜಾಗೃತಿ ಮೂಡಿಸುವ ಯೋಜನೆ ಕೂಡಾ ಸಿದ್ದಪಡಿಸಿಕೊಂಡಿದ್ದರು.
ಆದರೆ ಬಿಜೆಪಿ ಪಕ್ಷ ಇಡೀ ಪ್ರಕರಣವನ್ನು ಹಾದಿ ತಪ್ಪಿಸಲು ಕಾಂಗ್ರೆಸ್ ಪಕ್ಷದ ಮೇಲೆ ಗಧಾ ಪ್ರಹಾರ ಮಾಡಲು ಹೊರಟಿದೆ. ರಾಷ್ಟ್ರ ಮಟ್ಟದಲ್ಲಿ ಸನ್ಮಾನ್ಯ ರಾಹುಲ್ ಗಾಂಧಿಯವರು ಮತ್ತು ಪ್ರಿಯಾಂಕಾ ಗಾಂಧಿಯವರನ್ನು ಈ ಪ್ರಕರಣದಲ್ಲಿ ಭಾಗಿಯಾಗಲು ತಪ್ಪಿಸಿದ್ದನ್ನು ಇಡೀ ರಾಷ್ಟ್ರದ ಜನತೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದಾರೆ. ಇದೇ ಹಾದಿಯನ್ನು ಬಿಜೆಪಿ ಪಕ್ಷ ಕರ್ನಾಟಕದಲ್ಲೂ ಹಿಡಿದು ಕೆಟ್ಟ ರಾಜಕೀಯ ನಡೆಗೆ ನಾಂದಿ ಹಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರನ್ನು ಇಂತಹ ಚಟುವಟಿಕೆಗಳಿಂದ ದೂರ ಇಡಲು, ದಲಿತ, ಶೋಷಿತ ವರ್ಗಗಳ ವಿರೋಧಿ ಬಿಜೆಪಿ ಪಕ್ಷ ತನ್ನೆಲ್ಲಾ ಶಕ್ತಿ ಉಪಯೋಗಿಸಿದೆ. ಅಧಿಕಾರ ದುರ್ಬಳಕೆ, ದುರಾಡಳಿತ, ದಲಿತ, ಶೋಷಿತ ವರ್ಗಗಳ ವಿರೋಧಿ ನಿಲುವಿನ ಬಿಜೆಪಿ ಪಕ್ಷ ಮುಂದಿನ ದಿನಗಳಲ್ಲೂ ಇದೇ ದಾರಿ ಮುಂದುವರಿಸಿದ್ದೇ ಆದರೆ ನಾವೂ ಉಗ್ರವಾಗಿಯೇ ನಮ್ಮ ದಾರಿಯಲ್ಲಿ ಮುಂದುವರಿಯಬೇಕಾದ ಅಗತ್ಯ ಎದುರಾಗುತ್ತದೆ. ಮೊದಲನೆಯದಾಗಿ ಈ ರೀತಿಯ ದ್ವೇಷದ ರಾಜಕಾರಣ ಮಾಡಿ ನೀವು ನಮ್ಮನ್ನು ಕಟ್ಟಿ ಹಾಕುತ್ತೇವೆ ಎಂಬ ಭ್ರಮೆಯಲ್ಲಿ ಇದ್ದರೆ ಅದನ್ನು ಮೊದಲು ತಗೆದುಹಾಕಿ. ಈ ವಿಚಾರದಲ್ಲಿ ನಮ್ಮ ದಾರಿ ನಿಚ್ಚಳವಾಗಿದೆ. ರಾಜ್ಯದಲ್ಲಿ ಉಪಚುನಾವಣೆ ಮತ್ತು ದಲಿತ ವಿರೋಧಿ ನಡೆ ಖಂಡಿಸಿದ ಪರಿಣಾಮ ಇಂತಹ ಅಡ್ಡದಾರಿ ಹಿಡಿದಿರುವುದು ಇಡೀ ರಾಜ್ಯದ ಜನತೆ ನಿಮ್ಮ ನಡೆಯನ್ನು ಗಮನಿಸುತ್ತಿದೆ. ದೇಶದ ಯಾವ ಮೂಲೆಯಲ್ಲೂ ಇಂತಹ ಶೋಷಿತ ವರ್ಗಗಳ ಮೇಲಿನ ದೌರ್ಜನ್ಯಕ್ಕೆ ನಮ್ಮ ವಿರೋಧವಿದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಸಮಾದಾನವನ್ನು ಹೊರಹಾಕಿದ್ದಾರೆ.
Comments
Post a Comment