ಪ್ರತಿಭಟನೆಗೆ ಸಂಬಂಧಿಸಿದಂತೆ ಕುಣಿಗಲ್ ಶಾಸಕ ಡಾ.ರಂಗನಾಥ್ ವಿರುದ್ಧ ಎಫ್ಐಆರ್
ಕುಣಿಗಲ್ ಶಾಸಕ ಡಾ.ರಂಗನಾಥ್ ವಿರುದ್ಧ ಎಫ್ಐಆರ್ ಕುಣಿಗಲ್ : ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿದ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ವಿರುದ್ಧ ಕುಣಿಗಲ್ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಅಪಘಾತ ಪ್ರಕರಣವೊಂದರಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆಯನ್ನು ಶೀಘ್ರವಾಗಿ ಮಾಡಿಕೊಡುವಂತೆ ಮನವಿ ಮಾಡಿಕೊಂಡ ಗ್ರಾಪಂ ಸದಸ್ಯರೊಬ್ಬರೊಂದಿಗೆ ಸಿಪಿಐ ಗುರುಪ್ರಸಾದ್ ಉದ್ದಟತನದಿಂದ ವರ್ತಿಸಿದ್ದ ಆರೋಪ ಕೇಳಿಬಂದಿತ್ತು. ಜೂನ್ 19ರಂದು ಸಿಪಿಐ ಗುರುಪ್ರಸಾದ್ ವಿರುದ್ಧ ಜನರನ್ನು ಸೇರಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಶಾಸಕ ಡಾ.ರಂಗನಾಥ್ ವಿರುದ್ಧ ಅಂದೇ ಪೊಲೀಸರು ಎನ್‍ಸಿಆರ್(ಗಂಭೀರವಲ್ಲದ ಪ್ರಕರಣ) ದಾಖಲಿಸಿದ್ದರು. ಸಿಪಿಐ ಗುರುಪ್ರಸಾದ್ ವಿರುದ್ಧ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಎನ್‍ಸಿಆರ್ ಮಾತ್ರ ದಾಖಲಿಸಿದ್ದರು. ಜೆಡಿಎಸ್ ಮುಖಂಡ ಜಗದೀಶ್ ನಾಗರಾಜಯ್ಯ ಕುಣಿಗಲ್ ಶಾಸಕ ರಂಗನಾಥ್ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ದೂರು ನೀಡಿದ ಹಿನ್ನೆಲೆಯಲ್ಲಿ ಇದೀಗ ಎಫ್‍ಐಆರ್ ದಾಖಲಿಸಲಾಗಿದೆ.